ಶ್ರೇಣಿಸಮಾಜವಾದ
	ಪ್ರತಿಯೊಂದು ಕೈಗಾರಿಕೆಯ ಆಡಳಿತವನ್ನು ಅಲ್ಲಿಯ ಕೆಲಸಗಾರರ ಸಂಘದ ಮೂಲಕ ನಡೆಯುವಂತೆ ಮಾಡಿ, ಉತ್ಪಾದಕರೂ ಬಳಕೆದಾರರೂ ಸಹಕರಿಸಿ ಒಂದು ತೀರ್ಮಾನಕ್ಕೆ ಬಂದು ಪದಾರ್ಥಗಳ ಬೆಲೆಗಳನ್ನು ನಿರ್ಧರಿಸುವುದಕ್ಕಾಗಿ ಇಂಗ್ಲೆಂಡಿನಲ್ಲಿ ಹುಟ್ಟಿದ ಒಂದು ಬಗೆಯ ಸಮಾಜವಾದ; 20ನೆಯ ಶತಮಾನದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯ ಆಧಾರದ ಮೇಲೆ ರೂಪಿತವಾದ ಒಂದು ತತ್ತ್ವ(ಗಿಲ್ಡ್ ಸೋಷಿಯಲಿಸಮ್). ಇದನ್ನು ಪೇಂಟೀ, ಹಾಬ್ಸನ್, ಕೋಲ್, ಬರ್ಟ್‍ರಂಡ್ ರಸೆಲ್-ಇವರು ಪ್ರತಿಪಾದಿಸಿದ್ದಾರೆ. ಇಂಗ್ಲೆಂಡಿನ ಫೇಬಿಯನ್ ಸಂಘದ ಸದಸ್ಯರು ಮತ್ತು ಪ್ರಜ್ಞಾಶಾಲಿಗಳು ಇದರ ಅನುಯಾಯಿಗಳು. ಸಮಾಜದಲ್ಲಿ ಬೇರೂರಿರುವ ಆರ್ಥಿಕ ಅಸಮಾನತೆ ಯನ್ನು ಬುಡಸಹಿತ ಕಿತ್ತುಹಾಕುವುದಕ್ಕೋಸ್ಕರ ಸರ್ಕಾರ ಕೈಗಾರಿಕೆಗಳನ್ನು ರಾಷ್ಟ್ರೀಕರಣ ಮಾಡಿದರೆ ಸರ್ಕಾರದ ಪ್ರಾಬಲ್ಯ ಹೆಚ್ಚಿ, ಅಧಿಕಾರಿಗಳ ದರ್ಪಕ್ಕೆ ಮಿತಿಯಿಲ್ಲದೆ ಶ್ರಮಜೀವಿಗಳಿಗೆ ಯಾವ ವಿಧವಾದ ಪ್ರಯೋಜನವೂ ಆಗುವುದಿಲ್ಲ; ಅಲ್ಲದೆ ಈಗಿನ ಸ್ಥಿತಿಯೇ ಮುಂದುವರಿದರೆ ಪದಾರ್ಥಗಳ ವಿಕ್ರಯದಿಂದ ಬರುವ ಲಾಭವೆಲ್ಲವೂ ಗಿರಣಿಮಾಲೀಕರ ಮತ್ತು ಜಮೀನ್ದಾರರ ಹಾಗೂ ಬಂಡವಾಳಗಾರರ ಕೈಸೇರುವುದರಿಂದ ಈಗ ಆಚರಣೆಯಲ್ಲಿರುವ ಕೂಲಿಪದ್ಧತಿಯನ್ನು ರದ್ದುಪಡಿಸುವುದು ಒಳ್ಳೆಯದು; ಕಾರ್ಖಾನೆಗಳ ಮೇಲಿನ ಒಡೆತನ ಅಲ್ಲಿಯ ಶ್ರಮಜೀವಿಗಳ ಕೈಲಿದ್ದು, ಪ್ರತಿಯೊಂದು ಕೈಗಾರಿಕೆಯಲ್ಲೂ ವೃತ್ತಿಸಂಘವಿರಬೇಕು; ಆ ವೃತ್ತಿಗೆ ಸಂಬಂಧಪಡುವ ಕೆಲಸಗಾರರೆಲ್ಲರೂ ಆ ವೃತ್ತಿಸಂಘದ ಸದಸ್ಯರಾಗಿ ಸಂಘದ ಎಲ್ಲ ಕಾರ್ಯನಿರ್ವಹಣೆಯ ವಿಚಾರದಲ್ಲಿಯೂ ಪೂರ್ಣಸ್ವಾತಂತ್ರ್ಯ ಪಡೆದಿರಬೇಕು - ಇವು ಈ ತತ್ತ್ವದ ಮುಖ್ಯ ಲಕ್ಷಣಗಳು. ಅದಕ್ಕಾಗಿಯೇ ಕೈಗಾರಿಕೆಗಳ ವೃತ್ತಿಸಂಘಗಳಿಂದ ಕೂಡಿದ ಕಾಂಗ್ರೆಸ್ ಎಂಬ ಕೇಂದ್ರ ಸಂಸ್ಥೆಯನ್ನು ಸ್ಥಾಪಿಸಿ, ಈ ಎಲ್ಲ ವೃತ್ತಿಸಂಘಗಳ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಕೋಲ್ ಹೇಳಿದ್ದಾನೆ. 

	ಈಗ ಆಚರಣೆಯಲ್ಲಿರುವ ಪ್ರಜಾಪ್ರಭುತ್ವಪದ್ಧತಿ ಮತ್ತು ಪ್ರಾಂತೀಯ ಪ್ರಾತಿನಿಧ್ಯ ಪದ್ಧತಿಗಳನ್ನು ಈ ತತ್ತ್ವದ ಅನುಯಾಯಿಗಳು ಖಂಡಿಸಿರುವುದ ಲ್ಲದೆ, ಇವನ್ನು ಕಾರ್ಯಸಾಧನೆಯ ದೃಷ್ಟಿಯಿಂದ ಪುನಾರಚಿಸಬೇಕೆಂದೂ ಅಭಿಪ್ರಾಯಪಟ್ಟಿದ್ದಾರೆ. ಕೈಗಾರಿಕಾಕ್ಷೇತ್ರದಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸದೆ ರಾಜಕೀಯಕ್ಷೇತ್ರದಲ್ಲಿ ಮಾತ್ರ ಅದನ್ನು ಆಚರಣೆಗೆ ತರುವುದರಲ್ಲಿ ಅರ್ಥವಿಲ್ಲ; ಬಂಡವಾಳಶಾಹಿ ಪದ್ಧತಿಯನ್ನು ಈಗ ಇರುವಂತೆ ಮುಂದುವರಿಯಲು ಅವಕಾಶಕೊಟ್ಟರೆ ಪ್ರಜಾಪ್ರಭುತ್ವದಿಂದ ಪ್ರಪಂಚಕ್ಕೆ ಯಾವ ಪ್ರಯೋಜನವೂ ಆಗಲಾರದೆಂಬುದು ಈ ತತ್ತ್ವದಲ್ಲಿ ಒಲವುಳ್ಳವರ ಅಭಿಪ್ರಾಯ. ಈ ತತ್ತ್ವಕ್ಕೂ ರಾಜ್ಯಕ್ಕೂ ವಿರೋಧವಿಲ್ಲ. ಆದರೆ ಸರ್ಕಾರದ ಪರಮಾಧಿಕಾರದ ಕೆಲವು ಭಾಗಗಳನ್ನು ಇತರ ಸಂಘಗಳಿಗೆ ವಹಿಸಿಕೊಡುವುದು ಅಗತ್ಯವೆಂದು ಇದರ ಅನುಯಾಯಿಗಳು ಅಭಿಪ್ರಾಯಪಡುತ್ತಾರೆ.  								
	  (ಎನ್.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ